ಶ್ರೀ ಜಗದ್ಗುರು ಮೂರುಸಾವಿರಮಠವು ಹುಬ್ಬಳ್ಳಿಯಲ್ಲಿರುವ ಮಠವಾಗಿದೆ. ಪ್ರೊ. ವರದರಾಜ ಉಮರ್ಜಿಯವರು ಬೆಳಕಿಗೆ ತಂದ ಕಲಚೂರಿಯ ೧೨ ನೇ ಶತಮಾನದ ಶಿರಸಿಯ ಶಿಲಾಶಾಸನದಲ್ಲಿ ಮೂರುಸಾವಿರಮಠದ ಉಲ್ಲೇಖವಿದೆ. ಶ್ರೀ ಮೂರುಸಾವಿರಮಠದಲ್ಲಿ ಹುಚ್ಚನೆಂದರೆ ಬೆಂಕಿಯ ಕೆಂಡ. ಅವನ ಅಂಗಾರ ಹಿಡಿದು ಆಣೆಮಾಡಿದರೆ ಸಮಸ್ಯೆ ಮುಗಿಯಿತು ಎಂದು ಜನ ಇಂದಿಗೂ ನಂಬಿರುವರು. ಈ ಕಾರಣದಿಂದ ಇದಕ್ಕೆ ಹುಚ್ಚನ ಮಠ, ಗುರುಸಿದ್ಧಪ್ಪನ ಮಠ ಎಂದು ಕರೆಯಲಾಗುತ್ತದೆ. == ಇತಿಹಾಸ == ಶೈವ ಮೂಲದ ತಾಯಿ ಬೇರಿನಿಂದ ಈ ಮಠವು ಅಲ್ಲಮ ಸಂಪ್ರದಾಯದ ಶೂನ್ಯ ಸಿಂಹಾಸನ ಪೀಠವಾಗಿ ಉತ್ಕ್ರಾಂತಿಯಾಗಿದೆಯೆಂದು ಊಹಿಸಲಾಗಿದೆ. ಕಿತ್ತೂರು ಚೆನ್ನಮ್ಮನ ಸಂಸ್ಥಾನ ಅವನತಿಯ ನಂತರ ಅದೇ ಸಂಸ್ಥಾನದ ಕಟ್ಟಗೆಗಳನ್ನೇ ಈ ಮಠಕ್ಕೆ ಜೋಡಿಸಲಾಗಿದೆ. ತಾಳೆಗ್ರಂಥಗಳನ್ನು ಸಂಗ್ರಹಿಸಿಡಲು ಓಲೆಮಠವನ್ನು ಕಟ್ಟಲಾಯಿತು. ಈ ಮಠದ ಪೂವ೯ ಸ್ಥಾನದಲ್ಲಿರುವ ಮೂರುಸಾವಿರಮಠವನ್ನು ಪೂವ೯ದ ಮೂರುಸಾವಿರಮಠವೆಂದು ಕರೆಯಲಾಗುತ್ತಿದೆ. ಅಲ್ಲಮ ಪ್ರಭುವಿನ ಶೂನ್ಯ ಪೀಠದ ಪರಂಪರೆಯಲ್ಲಿ ಅನೇಕ ಜಗದ್ಗುರು ಪೀಠಗಳು, ನಿರಂಜನ ಪೀಠಗಳು ಉದಯಿಸಿದವು. ಆಗ ಅಲ್ಲಿಯ ಮೂರುಸಾವಿರ (೩೦೦೦) ಜನ ಭಕ್ತ ಮಹೇಶ್ವರರು ಪೂವಳ್ಳಿ(ಹುಬ್ಬಳ್ಳಿ)ಗೆ ಬಂದು ಈ ಧರ್ಮಪೀಠದಲ್ಲಿ ತಂಗಿದರು. ಈ ಐತಿಹಾಸಿಕ ಘಟನೆಯ ಪರಿಣಾಮವಾಗಿ ಮೂರುಸಾವಿರಮಠವಾಯಿತೆಂದು ಹಲವರ ಅಭಿಪ್ರಾಯ. == ಸಾಮಾಜಿಕ ಕ್ಷೇತ್ರ == ಶ್ರೀ ಮೂರುಸಾವಿರಮಠದ ಲಿಂಗೈಕ್ಯ ಜಗದ್ಗುರು ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳವರು ಜಗದ್ಗುರು ಪೀಠವನ್ನು ಅಲಂಕರಿಸಿದ ಮಹಾಮಹಿಮರು. ಸಮಾಜ ಸೇವೆಯೇ ಸದಾಶಿವನೊಲುಮೆಯಯ್ಯಾ ಎಂದು ಘೋಷಿಸಿದರು. ಹುಬ್ಬಳ್ಳಿಯಲ್ಲಿ ಶ್ರೀ ಜಗದ್ಗುರು ಗಂಗಾಧರ ಜಿನ್ನಿಂಗ್ ಅಂಡ್ ಪ್ರೆಸ್ಸಿಂಗ್ ಫ್ಯಾಕ್ಟರಿ ಸ್ಥಾಪಿಸಿದರು. ೧೯ ವಷ೯ಗಳ ಕಾಲ ಆಳಿಕೆಗೈದು ಲಿಂಗೈಕ್ಯರಾದರು. ಕನಾ೯ಟಕದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ "ಧರ್ಮತರಂಗಿಣಿ" ಎಂಬ ಮಾಸಪತ್ರಿಕೆಯನ್ನು ಆರಂಭಿಸಿ ಅದಕ್ಕೆ ಸ್ವತಂತ್ರ ಮುದ್ರಣಾಲಯವನ್ನು ಅಣಿಗೋಳಿಸಿದರು. ಅದರಂತೆಯೇ ಶಿಕ್ಷಣ ಪ್ರೇಮಿಗಳಾದ ಗುರಸಿದ್ಧರಾಜಯೋಗಿಂದ್ರರು ಕೆ. ಎಲ್. ಇ ಸಂಸ್ಥೆಯ ಸಂಚಾಲಕರನ್ನು ಪ್ರೇರೇಪಿಸಿ ಶ್ರೀ ಕಾಡಸಿದ್ಧೇಶ್ವರ ಕಾಲೇಜು ಸ್ಥಾಪಿಸಲು ೮೦ ಸಾವಿರ ರೂಪಾಯಿಗಳನ್ನು ದಾನ ನೀಡಿದರು. ಅದರಂತೆ ೧ ಲಕ್ಷ ರೂಪಾಯಿಗಳ ಕೊಡುಗೆ ನೀಡಿ ಜಗದ್ಗುರು ಗಂಗಾಧರ ಕಾಮರ್ಸ್ ಕಾಲೇಜನ್ನು ಸ್ಥಾಪಿಸಿದರು. ವಾಣಿಜ್ಯ ಕೇಂದ್ರವಾದ ಹುಬ್ಬಳ್ಳಿ ನಗರವನ್ನು ಶಿಕ್ಷಣ ಕೇಂದ್ರವಾಗಿ ನಿರ್ಮಿಸುವಲ್ಲಿ ಪರಿಶ್ರಮಿಸಿದರು. ಕ್ರಿ.ಶ ೧೯೫೮ ಮೇ ೧ ರಂದು ಹುಬ್ಬಳ್ಳಿಯ ಮೂರುಸಾವಿರಮಠದ ಇತಿಹಾಸದಲ್ಲಿ ನವಯುಗ ಆರಂಭವಾಯಿತು. ನಿರಂತರವಾಗಿ ದುಡಿಯುವ ಭಕ್ತವೃಂದವನ್ನು ಉದ್ಧರಿಸಿದ ದಿ. ಡಾ|| ಮೂಜಗಂ ರವರು ತಮ್ಮ ಕಾಲದಲ್ಲಿ "ಪರಂಜ್ಯೋತಿ" ಎಂಬ ಮಾಸಪತ್ರಿಕೆ ಪ್ರಾರಂಭಿಸಿದರು. ಇದರ ಮೂಲಕ ಧಮ೯, ಸಾಹಿತ್ಯ, ಸಂಸ್ಕೃತಿ, ಕಲೆ, ಅರೋಗ್ಯ ಕುರಿತಾದ ಚಟುವಟಿಕೆಗಳು ಜನರನ್ನು ಮುಗ್ಧಗೊಳಿಸುತ್ತಲಿವೆ. ಮೂಜಗ೦ ರವರ ಕಾಲದಲ್ಲಿ ಅನೇಕ ಶಾಲೆ, ಕಾಲೇಜುಗಳನ್ನು ಸ್ಥಾಪಿಸಿದರು. ಸ್ತ್ರೀ ಪುರುಷರ ಸಮಾನತೆಯ ವಿಚಾರವನ್ನು ಜನರಿಗೆ ತಿಳಿಸಿದರು. ಸ್ತ್ರೀ ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಡಬೇಕೆಂದು ಸರಕಾರದ ವಿಚಾರವಂತರ ಅಭಿಮತದಂತೆ ಈ ವಿಚಾರಗಳನ್ನು ಕಾಯ೯ರೂಪಕ್ಕೆ ತಂದರು. ಮಹಿಳೆಯರಿಗಾಗಿಯೇ ಶಾಲೆ, ಕಾಲೇಜುಗಳು, ಶಿಸುವಿಹಾರಗಳನ್ನು ಸ್ಥಾಪಿಸಿದ್ದಲ್ಲದೇ ಹುಬ್ಬಳ್ಳಿ ಮಹಾನಗರದಲ್ಲಿ ಪ್ರಪ್ರಥಮ ಮಹಿಳಾ ಕಾಲೇಜೊಂದನ್ನು ಸ್ಥಾಪಿಸಿದರು. ಇಂದು ೩೦೦೦ ವಿದ್ಯಾಥಿ೯ನಿಯರಿಗಿಂತಲೂ ಹೆಚ್ಚು ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ. == ಉತ್ಸವಗಳು == ಪ್ರತಿವರ್ಷ ಶ್ರಾವಣ ಮಾಸದಲ್ಲಿ ಕೊನೆಯ ಸೋಮವಾರದಂದು ಕರ್ತೃ ಶ್ರೀ ಗುರುಸಿದ್ಧೇಶ್ವರರ ರಥೋತ್ಸವ (ಜಾತ್ರೆ) ಜರುಗುತ್ತದೆ. ಇಲ್ಲಿ ದಸರಾ ಹಬ್ಬವನ್ನು ಪ್ರತಿವರ್ಷ ವಿಬೃಂಭಣೆಯಿಂದ ಆಚರಿಸಲಾಗುತ್ತದೆ. ಮಹಾಶಿವರಾತ್ರಿ, ಕಾರ್ತಿಕೋತ್ಸವ, ಬಸವ ಜಯಂತಿ ಹಾಗೂ ನಿತ್ಯ ಕರ್ತೃ ಗದ್ಗುಗೆಗೆ ಪೂಜಾ ಸೇವೆಗಳು ನಡೆಯುತ್ತವೆ. == ಉಲ್ಲೇಖಗಳು ==